Saturday, August 3, 2013

Tuesday, June 14, 2011

ಒಂದು ಬಾಟಲಿ ಬೀಯರು

ನೆನಪಿಸಿತು
ನನ್ನ ಜನ ನನ್ನ ಊರು
ನನ್ನ ಬದುಕ ಬೇರು..
ಒಂದು ಬಾಟಲಿ ಬೀಯರು

ನೆನಪಿಸಿತು
ನನ್ನಜ್ಜನ ಊರಿನ ಬಣ್ಣದ ತೇರು
ಅತ್ತೆ ಮಾಡಿದ್ದ ಸಿಹಿಯಾದ ಖೀರು
ಒಂದು ಬಾಟಲಿ ಬಿಯರು

ನೆನಪಿಸಿತು
ನನ್ನ ಪೆಹಲಾ ಪ್ಯಾರು
ಅವಳೊಂದಿಗೆ ನೋಡಿದ ಪಿಚ್ಚರು
ಒಂದು ಬಾಟಲಿ ಬಿಯರು

ನೆನಪಿಸಿತು
ಗೆಳೆಯರೊಂದಿಗಿನ ಟೂರು
ಕದ್ದು ಓಡಿಸಿದ್ದ ಅಪ್ಪನ ಸ್ಕೂಟರು
ಒಂದು ಬಾಟಲಿ ಬಿಯರು

ಕಳೆದ ದಿನಗಳನು ನೆನಪಿನಲ್ಲಿಡೋಣ
ಅಷ್ಟೋ ಇಷ್ಟೋ ಚೂರು ಪಾರು
ಬನ್ನಿ ಮುಗಿಸೋಣ ಒಂದು ಬಾಟಲಿ ಬಿಯರು

ಇದು ಮಧು ಶಾಲೆ

ಕನಸೊಂದು
ಅರಳಿದ್ದು ಇಲ್ಲಿಯೇ..
ಬದುಕೊಂದು
ಕಮರಿದ್ದು ಇಲ್ಲಿಯೇ

ಹೊಸದೊಂದು ಶೋಧ
ಹುಟ್ಟಿದ್ದು ಇಲ್ಲಿಯೇ
ಜೀವನದಲಿ ಸೋತ ಯೋಧ
ಸತ್ತದ್ದು ಇಲ್ಲಿಯೇ

ಸಿಕ್ಕ ಚೂರು ಪಾರು ಖುಷಿಗಳ
ಸಂಭ್ರಮವು ಇಲ್ಲಿಯೇ
ರಾಶಿ ರಾಶಿ ದುಃಖಗಳ ಮರೆಸುವ
ಭ್ರಮೆಯೂ ಇಲ್ಲಿಯೇ

ಜಾತಿ ತತ್ವಗಳ ಎಲ್ಲೆಗಳಿಲ್ಲದ
ವಿಶ್ವಮಾನವರು ಸಿಕ್ಕುವುದು ಇಲ್ಲಿಯೇ
ಯಾರದೋ ಕೇಡಿಗೆ ಯಾರದೋ ಸಾವಿಗೆ
ಮಹೂರ್ತವಿಕ್ಕುವುದೂ ಇಲ್ಲಿಯೇ

ಇದು ಮಧು ಶಾಲೆ
ಎಲ್ಲವೂ ನನ್ನದೆ,
ಯಾವುದೂ ನನ್ನದಲ್ಲವೆನ್ನುವರ ನೆಲೆ
ಒಮ್ಮೆ ಹೊಕ್ಕರೆ ಹೊರ ಬರಲು ಬಿಡದ ಜೇಡರ ಬಲೆ

Tuesday, July 20, 2010

ಅದೃಷ್ಟಹೀನರು


ನೆನಪಿನ ಅವಶೇಷಗಳ ಮೇಲೆ
ಭವಿಷ್ಯ ಕಟ್ಟಲು ಹೊರಟವರು
ನೆನಪುಗಳಲ್ಲೇ ಕಳೆದುಹೋದರು,
ಭೂತದ ದಿನಗಳೇ ವೈಭವದ
ದಿನಗಳೆಂದು ವರ್ತಮಾನದ
ಖುಷಿಗಳ ಕಳೆದುಕೊಂಡರು.....

Sunday, April 25, 2010

ವಾಸ್ತವ

ಬದಲಾದರೆ ಸಾಕೇ ವಾಸ್ತು
ಬದಲಾದಿತೆ ವರ್ತಮಾನ
ಬದಲಾದೀತೆ ಭವಿಷ್ಯ?

ಬದಲಾಗದಿರೆ ಒಳಗಿನ ವಸ್ತು
ಬದಲಾದಿತೆ ವರ್ತಮಾನ
ಬದಲಾದೀತೆ ಭವಿಷ್ಯ?

ನಮ್ಮೊಳಗಿನ ವಸ್ತು ಸರಿ ಇರದಿರೆ
ಹೊರಗಿನ ವಾಸ್ತು ಸರಿಪಡಿಸೆ
ಸರಿಯಾದೀತೆ ವರ್ತಮಾನ
ಬದಲಾದೀತೆ ಭವಿಷ್ಯ?

ಕುದುರೆಯ ಸ್ವಗತ...

ನಾನಿಂದು ಮುಕ್ತನಾದೆ
ಸ್ವತಂತ್ರನಾದೆ
ಇನ್ನಾರ ಹಂಗು ನನಗಿಲ್ಲ.
ಜೀತ ಮಾಡಬೇಕೆಂದಿಲ್ಲ..

ರಣರಂಗದಲಿ ವೀರರೊಡನೆ
ಸ್ವರ್ಗ ಸೇರುವ ಗತಿ ಇಂದು ನನಗಿಲ್ಲ
ಮೂಟೆಗಳ ಹೊತ್ತು ಬೆಟ್ಟ ಹತ್ತುವ
ದಿನಗಳು ಈಗಿಲ್ಲ

ಕಣ್ಗಾಪು ಕಟ್ಟಿ ಬಂಡಿಯನೇಕೆ ಎಳೆಯಲಿ..
ಬಂದಿವೆ ರಿಕ್ಷಾ ಟ್ರಾಕ್ಟರುಗಳು.
ಬೈಕು ಸ್ಕೂಟರುಗಳು..

ಯಾರದೋ ಪ್ರತಿಷ್ಟೆಗಾಗಿ..
ಯಾರೋ ಕಟ್ಟಿದ ಪಣದ ಹಣೆಬರಹವಾಗಿ
ಓಡಬೇಕೆಂದಿಲ್ಲ ಮೈದಾನದಲಿ..
ಇರುವರು ನನ್ನ ಬದಲಿಗೆ
ಸೆಹ್ವಾಗ್ ಧೋನಿಯರು
ದ್ರಾವಿಡ್ ತೆಂಡುಲ್ಕರರು...

Saturday, October 10, 2009

ನಿನ್ನೆ ಗಳಿಸಿದ ಸೊನ್ನೆ
ಅಡ್ಡ ಬಂದ ಹಳ್ಳ ದಿನ್ನೆ
ಇಂದು ನಮ್ಮ ಮೇಲೆತ್ತಿರುವ ಸನ್ನೆ
ಅದೆಷ್ಟೋ ವ್ಯರ್ಥ ಹೊತ್ತು ಕಳೆದದ್ದುಂಟು
ಇಂದಿಗೋ ಅದು ಅನುಭವಗಳ ಗಂಟು
ಅಂದು ಹಳಿದವನೇ ಇಂದು ಹೊಗಳುತಿರುವನು
ಅಂದು ತುಳಿದವನೆ ಇಂದು ಅಚ್ಚರಿ ಪಡುತಿರುವನು
ನಮ್ಮ ನಿನ್ನೆಗಳು ಇಂದಿಗಾಗಿ
ವರ್ತಮಾನ ಭವಿಷ್ಯಕ್ಕಾಗಿ