Tuesday, June 14, 2011

ಒಂದು ಬಾಟಲಿ ಬೀಯರು

ನೆನಪಿಸಿತು
ನನ್ನ ಜನ ನನ್ನ ಊರು
ನನ್ನ ಬದುಕ ಬೇರು..
ಒಂದು ಬಾಟಲಿ ಬೀಯರು

ನೆನಪಿಸಿತು
ನನ್ನಜ್ಜನ ಊರಿನ ಬಣ್ಣದ ತೇರು
ಅತ್ತೆ ಮಾಡಿದ್ದ ಸಿಹಿಯಾದ ಖೀರು
ಒಂದು ಬಾಟಲಿ ಬಿಯರು

ನೆನಪಿಸಿತು
ನನ್ನ ಪೆಹಲಾ ಪ್ಯಾರು
ಅವಳೊಂದಿಗೆ ನೋಡಿದ ಪಿಚ್ಚರು
ಒಂದು ಬಾಟಲಿ ಬಿಯರು

ನೆನಪಿಸಿತು
ಗೆಳೆಯರೊಂದಿಗಿನ ಟೂರು
ಕದ್ದು ಓಡಿಸಿದ್ದ ಅಪ್ಪನ ಸ್ಕೂಟರು
ಒಂದು ಬಾಟಲಿ ಬಿಯರು

ಕಳೆದ ದಿನಗಳನು ನೆನಪಿನಲ್ಲಿಡೋಣ
ಅಷ್ಟೋ ಇಷ್ಟೋ ಚೂರು ಪಾರು
ಬನ್ನಿ ಮುಗಿಸೋಣ ಒಂದು ಬಾಟಲಿ ಬಿಯರು

ಇದು ಮಧು ಶಾಲೆ

ಕನಸೊಂದು
ಅರಳಿದ್ದು ಇಲ್ಲಿಯೇ..
ಬದುಕೊಂದು
ಕಮರಿದ್ದು ಇಲ್ಲಿಯೇ

ಹೊಸದೊಂದು ಶೋಧ
ಹುಟ್ಟಿದ್ದು ಇಲ್ಲಿಯೇ
ಜೀವನದಲಿ ಸೋತ ಯೋಧ
ಸತ್ತದ್ದು ಇಲ್ಲಿಯೇ

ಸಿಕ್ಕ ಚೂರು ಪಾರು ಖುಷಿಗಳ
ಸಂಭ್ರಮವು ಇಲ್ಲಿಯೇ
ರಾಶಿ ರಾಶಿ ದುಃಖಗಳ ಮರೆಸುವ
ಭ್ರಮೆಯೂ ಇಲ್ಲಿಯೇ

ಜಾತಿ ತತ್ವಗಳ ಎಲ್ಲೆಗಳಿಲ್ಲದ
ವಿಶ್ವಮಾನವರು ಸಿಕ್ಕುವುದು ಇಲ್ಲಿಯೇ
ಯಾರದೋ ಕೇಡಿಗೆ ಯಾರದೋ ಸಾವಿಗೆ
ಮಹೂರ್ತವಿಕ್ಕುವುದೂ ಇಲ್ಲಿಯೇ

ಇದು ಮಧು ಶಾಲೆ
ಎಲ್ಲವೂ ನನ್ನದೆ,
ಯಾವುದೂ ನನ್ನದಲ್ಲವೆನ್ನುವರ ನೆಲೆ
ಒಮ್ಮೆ ಹೊಕ್ಕರೆ ಹೊರ ಬರಲು ಬಿಡದ ಜೇಡರ ಬಲೆ